ಬೆಂಗಳೂರಿನಲ್ಲಿ ಪರ್ಷಿಯನ್ ಬಿಳಿ ಬೆಕ್ಕು ಕಳ್ಳತನ, ಇದರ ಬೆಲೆ ಎಷ್ಟು ಗೊತ್ತಾ?
ಕೋರಮಂಗಲ 8ನೇ ಬ್ಲಾಕ್ಗೆ ಸ್ಕೂಟರ್ನಲ್ಲಿ ಎಂಟ್ರಿ ಕೊಟ್ಟಿದ್ದ ಇಬ್ಬರು ದುಷ್ಕರ್ಮಿಗಳು ಬಿಳಿ ಬಣ್ಣದ ಆರು ವರ್ಷದ ಪರ್ಷಿಯನ್ ಪಂಚ್ ಫೇಸ್ ಬೆಕ್ಕನ್ನು ಕದ್ದೊಯ್ದಿದ್ದಾರೆ. ಬೆಕ್ಕನ್ನು ಕಳೆದುಕೊಂಡ ಅಶ್ವಿನಿ ಅವರು ಸಿಸಿಟಿವಿ ದೃಶ್ಯಗಳ ಸಾಕ್ಷಿ ಸಮೇತ ಗುರುವಾರ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು, ನ.12: ಅಪರೂಪದ ತಳಿ ಎನ್ನಲಾಗುವ ಪರ್ಷಿಯನ್ ಬಿಳಿ ಬೆಕ್ಕು (Persian Cat) ಕಳ್ಳತನವಾಗಿದೆ. ಕೋರಮಂಗಲ 8ನೇ ಬ್ಲಾಕ್ಗೆ ಸ್ಕೂಟರ್ನಲ್ಲಿ ಎಂಟ್ರಿ ಕೊಟ್ಟಿದ್ದ ಇಬ್ಬರು ದುಷ್ಕರ್ಮಿಗಳು ಬಿಳಿ ಬಣ್ಣದ ಆರು ವರ್ಷದ ಪರ್ಷಿಯನ್ ಪಂಚ್ ಫೇಸ್ ಬೆಕ್ಕನ್ನು ಕದ್ದೊಯ್ದಿದ್ದಾರೆ. ಆರೋಪಿಗಳು ಬಿಲ್ಡಿಂಗ್ ಒಳಗೆ ನುಗ್ಗಿ ಬೆಕ್ಕನ್ನು ಕದ್ದಿದ್ದಾರೆ ಎಂದು 26 ವರ್ಷದ ಬೆಕ್ಕಿನ ಒಡತಿ ಅಶ್ವಿನಿ ಶಂಕರ್ ಪೂಜಾರಿ ಎಂಬುವವರು ದೂರು ದಾಖಲಿಸಿದ್ದಾರೆ.
ಅಶ್ವಿನಿ ಅವರು ವಾಸವಾಗಿರುವ ಬಿಲ್ಡಿಂಗ್ನ ಎದುರಿನ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಸುಮಾರು 15 ಸಾವಿರ ರೂಪಾಯಿ ಬೆಲೆಯ ಬಿಳಿ ಪರ್ಷಿಯನ್ ಬೆಕ್ಕನ್ನು ಕಳೆದುಕೊಂಡ ಅಶ್ವಿನಿ ಅವರು ಸಿಸಿಟಿವಿ ದೃಶ್ಯಗಳ ಸಾಕ್ಷಿ ಸಮೇತ ಗುರುವಾರ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:Viral Brain Teaser: ಇದು ಬೆಕ್ಕುಇಲಿಗಳ ಒಗಟು, ನೀವು ಮಾತ್ರ ಇದನ್ನು ಬಿಡಿಸಲು ಸಾಧ್ಯ
ಸೋಮವಾರ ರಾತ್ರಿ 9.30ರ ಸುಮಾರಿಗೆ ಬೆಕ್ಕು ಕಳ್ಳತನವಾಗಿದೆ ಎಂದು ಕೋರಮಂಗಲದ ಯೂನಿಯನ್ ಬ್ಯಾಂಕ್ ಎದುರು ವಾಸವಾಗಿರುವ ಬ್ಯಾಂಕ್ ಉದ್ಯೋಗಿ ಅಶ್ವಿನಿ ತಿಳಿಸಿದ್ದಾರೆ. ನನ್ನ ಸಹೋದರರು ಈ ಬೆಕ್ಕನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ನಾನು ರೂಂನೊಳಗೆ ಕೆಲವು ಕೆಲಸಗಳಲ್ಲಿ ಬಿಜಿ ಇದ್ದೆ. ಸ್ವಲ್ಪ ಸಮಯದ ನಂತರ, ಆಚೆ ಬಂದು ನೋಡಿದಾಗ ನನಗೆ ಬೆಕ್ಕು ಕಾಣಿಸಲಿಲ್ಲ. ನಂತರ ಇಡೀ ಮನೆಯನ್ನು ಹುಡುಕಿದೆ ಬೆಕ್ಕು ಎಲ್ಲೂ ಸಿಗಲಿಲ್ಲ. ನಾವು ಬಿಲ್ಡಿಂಗ್ನ ಎರಡನೇ ಪ್ಲೋರ್ನಲ್ಲಿ ಉಳಿದುಕೊಂಡಿದ್ದೇವೆ. ಬೆಕ್ಕು ಎಲ್ಲಿ ಹೋಯಿತು ಎಂದು ಗಾಬರಿ ಇಂದ ನಮ್ಮ ಪಕ್ಕದ ಬಿಲ್ಡಿಂಗ್ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದೆ. ಆಗ ಇಬ್ಬರು ಆರೋಪಿಗಳು ನಮ್ಮ ಕಟ್ಟಡಕ್ಕೆ ಪ್ರವೇಶಿಸಿ ನನ್ನ ಬೆಕ್ಕನ್ನು ತೆಗೆದುಕೊಂಡು ಹೋಗುವುದನ್ನು ನೋಡಿದೆ ಎಂದು ಅಶ್ವಿನಿಯವರು ತಿಳಿಸಿದ್ದಾರೆ.
ಆರೋಪಿಗಳಿಬ್ಬರೂ ಹೆಲ್ಮೆಟ್ ಧರಿಸಿದ್ದರು. ಅವರ ಬಳಿ ಪೆಟ್ಟಿಗೆ ಇತ್ತು, ಬೆಕ್ಕನ್ನು ಕದ್ದ ನಂತರ ಅದನ್ನು ಚೀಲದಲ್ಲಿ ಹಾಕಿಕೊಂಡು ವೇಗವಾಗಿ ಬೈಕ್ ಓಡಿಸಿಕೊಂಡಿ ಎಸ್ಕೇಪ್ ಆದರು. ಇಬ್ಬರು ಬೆಕ್ಕನ್ನು ತೆಗೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸಿದ್ದೇವೆ. ಬೆಕ್ಕಿನ ಚಿತ್ರವನ್ನು ವಾಟ್ಸಾಪ್ ಗ್ರೂಪ್ಗಳಲ್ಲಿ ಷೇರ್ ಮಾಡಲು ಹೇಳಿದ್ದೇವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ